ಬಸಾಲ್ಟ್
ಲಾವಾ ಪ್ರವಾಹದ ಕಾರಣವಾಗಿ ಮೈದಳೆದ, ಸಾರಲ್ ಲ್ಯಾಬ್ರಡೊರೈಟ್ ಮತ್ತು ಪೈರೊಕ್ಸೀನ್ ಫಲಕಗಳಿಂದಾದ ಮತ್ತು ಸ್ತಂಭ ರಚನೆಯುಳ್ಳ ಕಡುಬಣ್ಣದ ಅಗ್ನಿಶಿಲೆ. ಭೂಮಿಯ ಮೇಲೆ ಸಾಮಾನ್ಯವಾಗಿ ಕಾಣಬರುವ ಶಿಲೆಗಳೆಲ್ಲವನ್ನೂ ಎರಡು ಮುಖ್ಯ ವರ್ಗಗಳಾಗಿ ವಿಂಗಡಿಸಲಾಗಿದೆ. ಒಂದು ಅಧಿಕ ಸಿಲಿಕಾಂಶವನ್ನೊಳಗೊಂಡ, ಹರಳು ಹರಳಾಕಾರದ,  ತಿಳಿಬಣ್ಣದ ಗ್ರಾನೈಟ್ ವರ್ಗ. ಉದಾಹರಣೆಗೆ ಬೆಂಗಳೂರು ಸುತ್ತಮುತ್ತ ಕಟ್ಟಡಗಳಿಗಾಗಿ ಉಪಯೋಗವಾಗುವ ಸುಟ್ಟ ಕಲ್ಲು. ಇನ್ನೊಂದು ಕನಿಷ್ಠ ಸಿಲಿಕಾಂಶ (ಶೇಕಡಾ 45-50) ಒಳಗೊಂಡಿರುವ, ಕಪ್ಪು ಛಾಯೆಯ ಗಡುಸಾದ ಶಿಲಾವರ್ಗ. ಇದೇ ಬಸಾಲ್ಟ್. ಈ ವರ್ಗದ ಶಿಲೆ ಪಶ್ಚಿಮದಲ್ಲಿ ಮುಂಬಯಿಯಿಂದ ಹಿಡಿದು ಪೂರ್ವದಲ್ಲಿ ರಾಜಮಹೇಂದ್ರಿಯವರೆಗೆ ದಕ್ಷಿಣದಲ್ಲಿ ಬೆಳಗಾಂವಿಯಿಂದ ಹಿಡಿದು ಉತ್ತರದಲ್ಲಿ ವಿಂಧ್ಯಪರ್ವತಕ್ಕೂ ಆಚೆ ಇರುವ ಪ್ರದೇಶದವರೆಗೆ ವ್ಯಾಪಿಸಿದೆ. ದಖನ್ ಶಿಲಾಸ್ತೋಮವೆಂದು ಇದು ಪ್ರಸಿದ್ಧಿಯಾಗಿದೆ.

	ಬಸಾಲ್ಟ್ ಶಿಲೆಯನ್ನು ಮೊದಲಿಗೆ ಇಥಿಯೊಪಿಯಾ ದೇಶದಲ್ಲಿ ಗುರುತಿಸಿದರೆಂದೂ ಅಲ್ಲಿಯ ಜನರು ಇದನ್ನು ಬಸಲ್ ಎಂದು ಕರೆಯುತ್ತಿದ್ದುದರಿಂದ ಈ ಶಿಲೆಗೆ ಬಸಾಲ್ಟ್ ಎಂದು ನಾಮಕರಣವಾಯಿತೆಂದೂ ಪ್ರತೀತಿ. ಕಲ್ಲು ನೋಡುವುದಕ್ಕೆ ಕಪ್ಪು. ಗುಲ್ಬರ್ಗ, ಬೆಳಗಾಂವಿ, ಬಿಜಾಪುರ, ಬಿದರೆ ಜಿಲ್ಲೆಗಳ ಬಹುಭಾಗವೆಲ್ಲವೂ ಈ ಕಲ್ಲೇ ಆವರಿಸಿದೆ. ಗಾಳಿ ಮಳೆಗಳ ಹೊಡೆತಕ್ಕೆ ಸಿಕ್ಕಾಗ ಮಾತ್ರ ಕಲ್ಲು ಕಂದುಬಣ್ಣದ ಛಾಯೆ ಪಡೆಯುತ್ತದೆ. ಹರಳು ಲಕ್ಷಣವನ್ನು ತೋರಿಸದೆ ಕಪ್ಪು ಗಾಜಿನಂತಿರುವ ಬಸಾಲ್ಟಿಗೆ ಟಾಕಿಲೈಟ್ ಎಂದು ಹೆಸರು. ಸಾಮಾನ್ಯವಾಗಿ ಕಪ್ಪು ಬಣ್ಣದ ಸೂಕ್ಷ್ಮ ಹರಳುಗಳಿರುವ ಅಗ್ನಿಶಿಲೆಗಳೆಲ್ಲವನ್ನೂ ಬಸಾಲ್ಟ್ ಶಿಲೆಗಳೆಂದು ಕರೆಯುವುದು ವಾಡಿಕೆ.

	ಈಚಿಗಿನ ಅಗ್ನಿಪರ್ವತಗಳ ಬಾಯಿಯಿಂದ ಹೊರಹರಿಯುತ್ತಿರುವ ಕಾದ ಲಾವಾ ಪ್ರವಾಹ ಬಸಾಲ್ಟಿನಿಂದ ಕೂಡಿದ್ದು. ಈ ಬಗೆಯ ಶಿಲಾಪಾಕ ಅಗ್ನಿಪರ್ವತದಿಂದ ಹೊರ ಹರಿಯುವಾಗ ಪ್ರವಾಹದಂತೆ ಹರಿದು ನುಲುಚಿಕೊಂಡು ಹಗ್ಗದ ಆಕಾರ ಪಡೆದಿರುತ್ತದೆ. ಶಿಲೆ ಆರುವಾಗ ಅದರೊಳಗೆ ಅಡಗಿದ್ದ ಗಾಳಿ ಹೊರಬಂದು ಉಕ್ಕಿನ ನೊರೆಯಂತೆ ನೂರಾರು ರಂಧ್ರಗಳಿರುವ ಕಲ್ಲು ಫಲಿಸುತ್ತದೆ. ರಂಧ್ರಗಳಲ್ಲಿ ಕ್ರಮೇಣ ಬಗೆ ಬಗೆ ಬಣ್ಣದ ಖನಿಜಗಳು ರೂಪುಗೊಂಡು, ರಮಣೀಯ ಆಕೃತಿಗಳನ್ನು ತೋರಿಸುತ್ತವೆ. ಪುಣೆ ಮತ್ತು ಮುಂಬಯಿ ನಡುವೆ ರೈಲು ಮಾರ್ಗ ಕೊರೆಯುವಾಗ ಹೊರಬಿದ್ದ ಶಿಲೆಗಳಲ್ಲಿ ಈ ಬಗೆಯ ಸುಂದರ ಸಿಯಾಲೈಟ್ ಹರಳುಗಳನ್ನೊಳಗೊಂಡ ಬಸಾಲ್ಟ್ ಶಿಲೆಯನ್ನು ಕಾಣಬಹುದು.
	ಬಸಾಲ್ಟ್ ಸಾಮಾನ್ಯವಾಗಿ ಭೂಮಿಯಲ್ಲಿ ಸೀಳುಗಳ ಮೂಲಕ ಹೊರಬಿದ್ದು, ದಟ್ಟವಾಗಿ ಭೂಮಿಯ ಮೇಲೆ ಹರಿದು ಬಹು ವಿಸ್ತಾರವಾದ ಪ್ರದೇಶವನ್ನು ಆವರಿಸಿರುವ ಶಿಲಾವರ್ಗ. ಭಾರತದ ದಖನಿನ ಶಿಲಾಪ್ರವಾಹ 500,000 ಚದರ ಕಿಲೊಮೀಟರುಗಳಷ್ಟು ಪ್ರದೇಶ ಆವರಿಸಿಕೊಂಡು ಭೂಮಿಯ ಅತಿ ವಿಸ್ತಾರ ಬಸಾಲ್ಟ್ ಶಿಲಾಪ್ರವಾಹವೆಂದು ಹೆಸರುವಾಸಿಯಾಗಿದೆ. ಈ ಪ್ರವಾಹ ಮೂರು ಸಾವಿರ ಮೀಟರುಗಳಿಗೂ ಮಂದವಾಗಿ ಪದರ ಪದರವಾಗಿ ಒಂದರ ಮೇಲೊಂದು ಒಟ್ಟೈಸಿದಂತೆ ಶೇಖರವಾಗಿದೆ. ಕೆಲವೊಮ್ಮೆ ಈ ಶಿಲೆಗಳು ಉಷ್ಣಕಳೆದು ಆರುವಾಗ ಸ್ತಂಭಗಳಂತೆ ಬಿಟ್ಟುಕೊಳ್ಳುವುದುಂಟು. ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ ಬಂದರಿನ ಬಳಿ ಇರುವ ಸೇಂಟ್ ಮೇರಿ ದ್ವೀಪಗಳಲ್ಲಿ ಈ ಬಗೆಯ ಸ್ತಂಭಾಕಾರದ ಬಸಾಲ್ಟ್ ರಾಕ್ಷಸನ ಮೆಟ್ಟಲು (ಜಯಂಟ್ಸ್ ಕಾಸ್‍ವೇ) ಎಂದು ಪ್ರಸಿದ್ಧಿ ಹೊಂದಿದೆ.

	ಭೂಮಿಯಲ್ಲಿ ಗುರುತಿಸಿರುವ ಎಲ್ಲ ಬಗೆಯ ಅಗ್ನಿಶಿಲೆಗಳಿಗೂ ಬಸಾಲ್ಟ್ ಮೂಲ. ಇದರಿಂದ ಮೊದಲುಗೊಂಡು ಇತರ ಜಾತಿಯ ಶಿಲೆಗಳು ರೂಪುಗೊಂಡಿವೆ. ಭೂಮಿಯ ಹೊರಚಿಪ್ಪಿನ ಕೆಳಭಾಗವೆಲ್ಲ ಬಸಾಲ್ಟಿನಿಂದ ಕೂಡಿದೆಯೆಂದೇ ನಂಬಲಾಗಿದೆ. ಈ ಪದರವೇ ಆಗೊಮ್ಮೆ ಈಗೊಮ್ಮೆ ಕರಗಿ, ಬಿರುಕುಗಳ ಮೂಲಕ, ಅಗ್ನಿ ಪರ್ವತಗಳ ಮೂಲಕ ಹೊರಬಿದ್ದು ಶಿಲಾಪ್ರವಾಹವಾಗಿ ಹರಿದು ವಿಸ್ತಾರ ಪ್ರದೇಶಗಳನ್ನು ಆವರಿಸಿಕೊಂಡಿರುವುದು ಕಾಣುತ್ತದೆ.
(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ